Psalms 132

ದಾವೀದನ ಮನೆತನವನ್ನು ಪುನಃಸ್ಥಾಪಿಸಬೇಕೆಂಬ ಪ್ರಾರ್ಥನೆ

ಯಾತ್ರಾಗೀತೆ.

(ಕೀರ್ತ. 89; 2 ಸಮು. 7)

1ಯೆಹೋವನೇ, ದಾವೀದನ ಹಿತಕ್ಕೋಸ್ಕರ,
ಅವನ ಶ್ರಮೆಗಳನ್ನು ನೆನಪುಮಾಡಿಕೋ.
2 ಯಾಕೋಬನ ಶೂರನಾದ ಯೆಹೋವನಿಗಾಗಿ
ಒಂದು ವಾಸಸ್ಥಾನವನ್ನು ಏರ್ಪಡಿಸುವ ತನಕ,

3

<<ನಾನು ನನ್ನ ಮನೆಯೊಳಗೆ ಪ್ರವೇಶಿಸುವುದಿಲ್ಲ,

ಮಂಚವನ್ನು ಹತ್ತುವುದಿಲ್ಲ,
4 ಕಣ್ಣುಗಳನ್ನು ಮುಚ್ಚುವುದಿಲ್ಲ,
ರೆಪ್ಪೆಗಳನ್ನು ಕೂಡಿಸುವುದಿಲ್ಲ>> ಎಂದು
5 ಅವನು ಯೆಹೋವನಿಗೆ ಪ್ರಮಾಣಮಾಡಿ,
ಯಾಕೋಬನ ಶೂರನಿಗೆ ಹರಕೆ ಮಾಡಿಕೊಂಡನಲ್ಲಾ.

6

ಇಗೋ, ಅದು ಎಫ್ರಾತದಲ್ಲಿರುತ್ತದೆಂದು ಕೇಳಿದೆವು;

ಯಹಾರ್ ಮೈದಾನದಲ್ಲಿ ನಮಗೆ ಸಿಕ್ಕಿತು.
7 <<ಬನ್ನಿರಿ, ಆತನ ಮಂದಿರಕ್ಕೆ ಹೋಗಿ
ಆತನ ಪಾದಪೀಠದ ಮುಂದೆ ಅಡ್ಡಬೀಳೋಣ!>>
8 ಯೆಹೋವನೇ, ಎದ್ದು ನಿನ್ನ ಪ್ರತಾಪಯುಕ್ತವಾದ ಮಂಜೂಷದೊಡನೆ,
ನಿನ್ನ ವಾಸಸ್ಥಾನಕ್ಕೆ ಬಂದು ನೆಲೆಸು.

9

ನಿನ್ನ ಯಾಜಕರು ನೀತಿಯೆಂಬ ವಸ್ತ್ರವನ್ನು ಹೊದ್ದುಕೊಳ್ಳಲಿ;

ನಿನ್ನ ಭಕ್ತರು ಉತ್ಸಾಹಧ್ವನಿ ಮಾಡಲಿ.
10 ನಿನ್ನ ಸೇವಕನಾದ ದಾವೀದನನ್ನು ನೆನಪುಮಾಡಿಕೋ;
ನೀನು ಅಭಿಷೇಕಿಸಿದವನನ್ನು ತಳ್ಳಿಬಿಡಬೇಡ.

11

ಯೆಹೋವನು ದಾವೀದನಿಗೆ ಮಾಡಿದ ಪ್ರಮಾಣವು ಸ್ಥಿರವಾಗಿದೆ;

ಆತನು ಅದನ್ನು ಬದಲಿಸುವುದಿಲ್ಲ.
<<ನಿನ್ನ ಸಂತಾನದವರನ್ನು ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು;
12 ನಿನ್ನ ಮಕ್ಕಳು ನನ್ನ ನಿಬಂಧನೆಯನ್ನೂ,
ನಾನು ಆಜ್ಞಾಪಿಸಿದ ಕಟ್ಟಳೆಗಳನ್ನೂ ಕೈಕೊಂಡು ನಡೆಯುವುದಾದರೆ,
ಅವರ ಮಕ್ಕಳು ನಿನ್ನ ಸಿಂಹಾಸನದಲ್ಲಿ ಸದಾಕಾಲ ಕುಳಿತುಕೊಳ್ಳುವರು.>>

13

ನಿಶ್ಚಯವಾಗಿ ಯೆಹೋವನು ಚೀಯೋನನ್ನು ಅಪೇಕ್ಷಿಸಿ,

ತನ್ನ ನಿವಾಸಕ್ಕಾಗಿ ಆರಿಸಿಕೊಂಡಿದ್ದಾನೆ.
14 ಆತನು, <<ಇದು ನನ್ನ ಶಾಶ್ವತ ವಾಸಸ್ಥಾನ;
ಇಲ್ಲೇ ಇರುವೆನು; ಇದು ನನಗೆ ಇಷ್ಟ.

15

ಇದರ ಆದಾಯವನ್ನು ಆಶೀರ್ವದಿಸುವೆನು;

ಇಲ್ಲಿಯ ಬಡವರನ್ನು ಆಹಾರದಿಂದ ತೃಪ್ತಿಗೊಳಿಸುವೆನು;
16 ಯಾಜಕರಿಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸುವೆನು;
ಭಕ್ತರು ಉತ್ಸಾಹಧ್ವನಿ ಮಾಡುವರು.

17

ಇಲ್ಲಿಯೇ ದಾವೀದನ ಕೊಂಬು ಚಿಗುರುವಂತೆ ಮಾಡುವೆನು;

ನನ್ನ ಅಭಿಷಿಕ್ತನ ದೀಪವು ಉರಿಯುತ್ತಲೇ ಇರಬೇಕೆಂದು ನೇಮಿಸಿದ್ದೇನೆ.
18 ಅವನ ವೈರಿಗಳನ್ನು ನಾಚಿಕೆಯೆಂಬ ವಸ್ತ್ರದಿಂದ ಹೊದಿಸುವೆನು;
ಆದರೆ ಅವನ ಮೇಲೆ ಕಿರೀಟವು ಶೋಭಿಸುತ್ತಿರುವುದು.>>

Copyright information for KanULB